Monday, April 14, 2008

ನಗಬೇಡ ಓ ಹುಡುಗಿ ನೀ ನನ್ನ ನೋಡಿ



ನಗಬೇಡ ಓ ಹುಡುಗಿ ನೀ ನನ್ನ ನೋಡಿ
ನಗಿವಿಂದ ನೀ ಎನಗೆ ಮಾಡದಿರು ಮೋಡಿ
ನನ್ನ ನೋಡಿ ನಗುವುದೇ ನಿನಗೆ ಆಗಿಬಿಟ್ಟಿದೇಯಾ ರೂಢಿ ?
ನನ್ನಾಸೆಯೇ ನಿನ್ನಾಸೆಯಾದರೆ ಆಗುವೆಯಾ ಜೋಡಿ ?

ಮುಂಜಾನೆ ಭೂ ತಾಯಿಗೆ ಇಬ್ಬನಿಯಿಂದಾಗುವ ತಂಪು
ನಕ್ಕಾಗ ಹರಿಯುವುದು ನಿನ್ನ ನಗುವಿನ ಕಂಪು
ತಿಳಿದಿಲ್ಲ ನನಗಿನ್ನೂ ನಿನ್ನ ಮಾತಿನ ಸೊಂಪು
ಇರಬಹುದು ಅದೂ ಕೂಡ ನಿನ್ನ ನಗಿವಿನಂತೆಯೆ ಇಂಪು

Thursday, February 21, 2008

ನೀನು ಹಿಗಾಗ್ತೀಯಾ ಅಂತ ಗೊತ್ತಿದ್ರೆ ನಾನು ಹಾಗಿರ್ತಿರಲಿಲ್ಲಾ


ಎನ್ ಗೆಳೆಯಾ?

ನಂಗೂ ನಿಂಗೂ ಬಾಲ್ಯದ ನಂಟು ಅಲ್ವಾ...? ವಯಸ್ಸಿನಲ್ಲಿ ಕನಿಷ್ಟ ಅಂದ್ರೂ ೭-೮ ವರ್ಷಗಳ ವೆತ್ಯಾಸ. ತುಂಬಾ ಒಳ್ಳೆ ಹುಡುಗ ನೀನು, ನೀನೆ ಹೇಳಿದ ಹಾಗೆ ನಾನ್ ಸಿಗೋತನಕ "ಗೆಳೆತನ ಅಂದ್ರೆ ಏನು" ಅಂತ ನಿಂಗೆ ಗೊತ್ತೇ ಇರಲಿಲ್ವಾ? ಹಾಗದ್ರೆ..... ಆ ಗೆಳೆತನನಾ ಕೊನೆತನಕ ಕಾಪಾಡಿಕೊಂಡು ಹೋಗೊದನ್ನು ಕೂಡ ನಿನಗೆ ನಾನೇ ಹೇಳಿಕೊಡಬೇಕಾಗಿತ್ತಾ? ಯಾಕಪ್ಪ ಇವನ ಸಹವಾಸ ಅನ್ನೋ ಮಟ್ಟಿಗೆ ಸತಾಯಿಸಿತಿಯಲ್ಲಾ ಗುರು.

ಜೀವನದಲ್ಲಿ ಮನುಷ್ಯ ಬದಲಾಗೋದು ಅನಿರ್ವಾಯಾನಾ? ನಿನ್ನ ವಯಸ್ಸಿನ ಸ್ನೇಹಿತರ ಗುಂಪಿನಲ್ಲಿ ಯಾರಿಗೂ ನಿನ್ನ ಬಗ್ಗೆ ಒಳ್ಳೆ ಅಭಿಪ್ರಾಯ ಇರಲಿಲ್ಲಾ, ಆದ್ರೂ ನಾನು ನಿನ್ನನ್ನ ನನ್ನ ಸ್ನೇಹಿತನಾಗಿ ಸ್ವೀಕರಿಸಿದೆ ಹಾಗಾಗಿ ನೀನು ನನ್ನ ಸ್ನೇಹಿತರ ಗುಂಪಿನಲ್ಲಿ ಸೇರಿಕೋಡೆ ಇದರಿಂದ ನಿಂಗೆ ನನ್ನ ಸ್ನೇಹಿತರ ಪರಿಚಯವಾಯ್ತು ನಿಜಾನಾ..? ನನ್ನ ನಿನ್ನ ಸ್ನೇಹ ಕಂಡು ಅದೇಷ್ಟೋ ಜನರಿಗೆ ನಿನ್ನ ಮೇಲಿನ ಅಭಿಪ್ರಯ ಬದಲಾಯ್ತು ಅನ್ನೊದನ್ನ ನೀನು ನಂಬ್ತಿಯಾ..?

ಆದ್ರೆ ಇತ್ತಿಚಿಗಿನ ೨ ವರ್ಷಗಳಲ್ಲಿ ನೀನು ಮೊದಲಿನ ಹಾಗಿಲ್ಲಾ ತುಂಬಾ ಬದಲಾಗಿದ್ದಿಯಾ ಅನ್ನೋದಕ್ಕಿಂತ ತುಂಬ ಜಾಣ ಅಥವಾ ಬುದ್ದಿವಂತ ಆಗಿದ್ದೀಯಾ ಅಂತ ಹೇಳಬಹುದು. ದೇಹ, ಅನುಭವ, ಜೀವನದ ಶೈಲಿಗಳು ಕಾಲಕ್ಕೆ ತಕ್ಕಂತೆ ಬದಲಾಗೋದು ಸಹಜ ಬಿಡು. ಆದ್ರೆ ಅವುಗಳ ಜೊತೆ ಮನಸು ಬದಲಾಗೋದು ಅರ್ನಿವಾಯಾನಾ? ಬದಲಾಗೋದು ಅಂದ್ರೆ ಜೀವನದಲ್ಲಿ ಕಳೆದು ಹೋದ ಪುಟಗಳನ್ನ ಮರೆಯೋದು ಅಂತಲ್ಲಾ ಗುರು. ಇಂದು ನಮ್ಮ ಜೀವನದಲ್ಲಿ ಯಾವ ಮಟ್ಟಕ್ಕೆ ತಲುಪಿದ್ದಿವಿ ಅಂತ ತಿಳ್ಕೋಬೇಕಾದ್ರೆ ನಮಗೆ ಅದೇ ಹಿಂದಿನ ಜೀವನದ ನೆನಪುಗಳ, ಚಿತ್ರಗಳ, ಕಳೆದುಹೋದ ಪುಟಗಳ ಅಗತ್ಯವಿದೆ ಗೊತ್ತಾಯ್ತಾ? ಕತ್ತಲೆ ಇಲ್ಲಾಂದ್ರೆ ಬೆಳಕಿಗೇನು ಅರ್ಥ ಗುರು. ಕತ್ತಲೆ ಇರೋದ್ರಿಂದಲೆ ನಾವು ಬೆಳಕನ್ನ ಗುರುತಿಸೋಕೆ ಆಗೋದು. ಹಾಗೆ ಹಿಂದಿನ ಜೀವನ ಮರೆತ್ರೆ ಇಂದಿನ ಜೀವನದ ಅರ್ಥ ಹುಡುಕೋದು ಕಷ್ಟ ತಿಳ್ಕೋ.......

ನೀನು ತುಂಬಾ ಜಾಣ ಆಗ್ಬಿಟ್ಟಿದ್ದೀಯಾ? ಬಿಡು. ಮತ್ತೆ ನೀನಾಡೋ ಮಾತುಗಳು ಅಬ್ಬಾ ಅದೇನು ಗುರು ನಿನ್ನ ಮಾತುಗಳನ್ನ ಕೇಳ್ತಾ ಕುತ್ಕೊಂಡ್ರೆ ಮಾತಾಡ್ತಾ ಇರೋನು ನೀನು ಅನ್ನೋದನ್ನೆ ಮರೆಸಿಬಿಡೋ ಹಾಗೆ ಮಾತಾಡ್ತೀಯಾ ಗೊತ್ತಾ....? ಏನಣ್ಣಾ ಎಲ್ಲಿಂದ ಕಲ್ತೆ ಇದೆಲ್ಲಾ.....? "ಜನ ಗಣ ಮನ ಅಧಿನಾಯಕ ಜಯ ಹೇ" ಅಂತ ಹಾಡಿದ ಕೂಡ್ಲೆ ನಾನೇ ರವೀಂದ್ರನಾಥ ಠಾಗೂರ್ ಅನ್ನೋಕಾಗೊತ್ತಾ? ಹಾಗೇ ಯಾರೋ ಆಡಿದ ನಾಲ್ಕು ಮಾತುಗಳನ್ನ ನೀನು ಕಲಿತುಬಿಟ್ರೆ ನೀನೆ ಅವನು ಅಂದ್ಕೋಳ್ಳೊಕೆ ಆಗತ್ತಾ ಇಲ್ಲಾ ಅಲ್ವಾ.....?

ಮನುಷ್ಯ ಆಡೋ ಮಾತುಗಳು ಅವನ ಮನಸಿನ ಮುನ್ನುಡಿ ಅಂತಾರೆ, ಆದ್ರೆ ನಿನ್ನ ವಿಷಯದಲ್ಲಿ ಅದು ಸುಳ್ಳು ಅಂತ ಸಾಬೀತು ಮಾಡ್ಬಿಟ್ಟೆ. ಮೆಚ್ಕೊಬೇಕು ನಿನ್ನನ್ನ ಮತ್ತೆ ನೀನು ಯೋಚಿಸೋ ರೀತೀನಾ... ನೀನು ಆಡೋ ಮಾತುಗಳಿಗೂ ಮತ್ತೆ ನಿನ್ನ ಮನಸಿನ ಯೋಚನೆಗಳಿಗೂ ಯಾವುದೇ ಸಂಭಂಧ ಇಲ್ಲಾ, ಮನುಷ್ಯ ಜೀವನದಲ್ಲಿ ಎಷ್ಟೇ ಬೆಳೆದ್ರೂ, ಜಾಣ ಆದ್ರೂ ನಿನ್ನೆದನ್ನ ಮರೆಯೋಕೆ ಆಗತ್ತಾ. ಸರಿ ಬಿಡು ನಿನ್ನಿಷ್ಟ ನಿನಗೆ ಬುದ್ದಿವಾದ ಹೇಳೋ ತಾಳ್ಮೆ ನಂಗಿದ್ರೂ ಅದನ್ನ ಕೇಳೋ ತಾಳ್ಮೆ ನಿಂಗೆಲ್ಲಿದೆ, ಮತ್ತೆ ನಾನೇನಿದ್ರೂ ನನಗೆ ಸಮನಾದ ಬುದ್ದಿವಂತಿಕೆ ಅಥವಾ ನನಗಿಂತ ಕಡಿಮೆ ಬುದ್ದಿವಂತಿಕೆ ಹೊಂದಿರೋರ ಹತ್ರ ಚರ್ಚಿಸೋದು. ನೀನು ಮೊದಲೇ ನನ್ನಷ್ಟೆ ಬದ್ದಿವಂತನಾಗಿದ್ದೆ ಆವಾಗ ನಿಂಗೆ ಎರಡು ಬುದ್ದಿಮಾತುಗಳನ್ನ ಹೇಳಬಹುದಿತ್ತು ಆದ್ರೆ ಕಾಲಾ ಬದಲಾಗಿ ಅದಕ್ಕೆ ತಕ್ಕಂತೆ ನೀನು ಬದಲಾಗಿದ್ದಿಯಾ ಹಾಗೂ ನನಗಿಂತ ಬುದ್ದಿವಂತ ಮತ್ತು ಅನುಭವಸ್ಥ ಕೂಡ ಆಗಿದ್ದಿಯಾ ಅಂದ ಮೇಲೆ ನಮ್ಮಂತವರ ಬುದ್ದಿ ಮಾತುಗಳನ್ನ ಕೇಳೋ ಲೆವಲಲ್ಲಿ ನೀನು ನಿನ್ನೆ ಇದ್ದೆ, ಇವತ್ತಲ್ಲಾ.... ಹಾಗಾಗಿ ನೀನು ನನಗಿಂತ ಬುದ್ದಿವಂತ ಆಗಿರೋದು ನಂಗೂ ಗೊತ್ತಿದೆ ಅಂದ ಮೇಲೆ ನಿಂಗೆ ಬುದ್ದಿ ಮಾತು ಹೇಳೋ ಮಾತೇ ಬರಲ್ಲಾ.

ಇಲ್ಲಿ ನಾನು ನಿನಗೆಷ್ಟು ಸಹಾಯ ಮಾಡಿದ್ದಿನಿ ಮತ್ತೆ ಅದಕ್ಕೆ ನೀನೆಷ್ಟು ಮಾಡಿದ್ದಿಯ ಅನ್ನೋ ಬಗ್ಗೆ ಮಾತಡ್ತಾ ಇಲ್ಲಾ ಮನುಷ್ಯನ ಯೋಚನೆ, ನಡುವಳಿಕೆಯಲ್ಲಿ ಆಗೋ ಬದಲಾವಣೆಗಳ ಬಗ್ಗೆ ಬರೀತಿರೋದು. ನೀನು ತುಂಬಾ ಜಾಣ ಆಗಿರೋದಂತು ನಿಜಾ "ವಿನಾಶ ಕಾಲೇ ವಿಪರೀತ ಬುದ್ದಿ" ಅಂತ ಯಾರೋ ಹೇಳಿದ ನೆನಪು ನೀನು ನಿನ್ನ ವಿನಾಶಕ್ಕೆ ಇಷ್ಟೊಂದು ಜಾಣ ಆಗಿರಬಹುದು ಯಾರಿಗೊತ್ತು. ತಪ್ಪು ಕಣೋ ನೀನು ಮೊದಲಿಂದ್ಲು ಜಾಣಾನೇ ಮತ್ತೆ ಜಾಣ ಆಗೊದು ಬೇಕಿರಲಿಲ್ಲಾ. ನಿನ್ನ ಈ ಮಿತಿಮಿರಿದ ಜಾಣತನಾನೇ ಇವಾಗ ನಮ್ಮ ಈ ಸ್ನೇಹದ ಅಂತ್ಯಕ್ಕೆ ಕಾರಣ ಆಗಿರೋದು.

ಕವಿರತ್ನ ಕಾಳಿದಾಸ ಗೊತ್ತಾ ನಿಂಗೆ ಪಾಪ ಅವನು ಹುಟ್ಟಿನಿಂದಾನೇ ಸ್ವಲ್ಪ ದಡ್ಡನಾಗಿದ್ದನಂತೆ ಹಾಗಾಗಿ ಅವನು ತಾನು ಕುಳಿತ ಮರದ ರೆಂಬೆಯನ್ನೇ ಕಡಿಯೋಕೆ ಹೊದ್ನಂತೆ ಅವನಿಗೆ ಆ ರೆಂಬೆ ಕಡಿದ್ರೆ ತಾನು ಕೆಳಕ್ಕೆ ಬೀಳ್ತಿನಿ ಅನ್ನೋದೆ ಗೊತ್ತಿರಲಿಲ್ವಂತೆ !!!. ಛೇ ... ಛೇ ನಿನ್ನನ್ನ ಅ ದಡ್ಡನೊಂದಿಗೆ ಹೊಲಿಸೋದಾ..? ಇಲ್ಲಾ ನೀನು ಹಾಗಲ್ಲಾ ನೀನು ಬಹಳ ಜಾಣ ನಿಂಗೂ ಗೊತ್ತು ನೀನು ಕುಳಿತಕೊಂಡ ರೆಂಬೆ ಕಡಿದ್ರೆ ನೀನು ಬಿಳ್ತಿಯಾ ಅಂತ. ಆದ್ರೂ ನಿಂಗೆ ಆ ರೆಂಬೆ ಕಡಿಲೇಬೆಕು ಅನ್ನೊ ಹಟ ಮತ್ತು ಅದು ನಿಂಗೆ ಅಂಟಿಕೊಂಡಿರೋ ಚಟಾನೂ ಕೂಡ. ರೆಂಬೆ ಎಷ್ಟು ಗಟ್ಟಿ ಇದೆ ಅಂತ ತಿಳ್ಕೊಳ್ಳೊ ಕೆಟ್ಟ ಆತುರ, ತವಕ ಅಲ್ವಾ? ನಿಂಗೂ ಗೊತ್ತು ಆ ರೆಂಬೆ ನಿನ್ನ ಕೈಲಿ ಕಡಿಯೋಕೆ ಆಗಲ್ಲ ಅಂತ ಆದ್ರೂ ಕೆಟ್ಟ ಮನಸು ಅದರ ತುಂಬಾ ಕೊಳಕು ಯೋಚನೆ ಪೂರ್ತಿ ರೆಂಬೆ ಕಡಿಲಿಕ್ಕೆ ಆಗದಿದ್ರೂ ಸರಿ, ಆ ರೆಂಬೆಗೆ ಸ್ವಲ್ಪಾನಾದ್ರೂ ಕಡಿದು ಆದಷ್ಟು ನೋವಾದ್ರೂ ಮಾಡಿಬಿಡೋಣಾ ಅನ್ನೋ ಹುಚ್ಚು ಸಾಹಾಸ ಏನಂತಿಯಾ..?

ನೀನು ತಿಳ್ಕೊಂಡಷ್ಟು ಸುಲಭವಾಗಿ ಕಡಿಬಹುದಾದ ರೆಂಬೆ ಇದಾಗಿದ್ರೆ, ಇಷ್ಟು ವರ್ಷಗಳ ಕಾಲ ನಿನ್ನಂತವನನ್ನ ತನ್ನ ಮೈಮೇಲೆ ಕುಳ್ಳರಿಸಿಕೊಂಡು ಇರ್ತಿರಲಿಲ್ಲಾ ಅನ್ನೋದನ್ನ ನೀನು ಮರೆತುಬಿಟ್ಟಿದ್ದಿಯಾ....... ನಿನ್ನ ಈ ಬುದ್ದಿವಂತಿಗೆಗೆ ನಗಬೇಕೋ ಇಲ್ಲಾ ಅಳಬೇಕೋ ಅಂತ ನಂಗೆ ತೋಚುತ್ತಿಲ್ಲಾ. ಆದ್ರೆ ಖಂಡಿತ ಹೇಳ್ತಿನಿ ನಿನಂತೂ ಒಂದಿಲ್ಲ ಒಂದು ದಿನ ಅಳೋದು ಗ್ಯಾರಂಟಿ ಏನ್ಮಾಡೊಕಾಗೊತ್ತೆ. "ನಾ ಮಾಡಿದ ಕರ್ಮ ಬಲವಂತವಾದ ಮೇಲೆ ನೀ ಮಾಡುವುದೇನೋ" ಅನ್ನೋ ಹಾಗೆ ನಾವು ಮಾಡಿದ್ದು ನಾವೇ ನಮ್ಮ ಜೀವನದಲ್ಲಿ ಅನುಭವಿಸಬೇಕು ಅದೇ ಜಗದ ನಿಯಮ ಇಲ್ಲಿ ನಾನು ನೀನು ಅನ್ನೋ ಪ್ರಶ್ನೆ ಬರೊಲ್ಲಾ.

ಗೊತ್ತು ಗುರಿ ಇಲ್ಲದ ನಿನ್ನ ಜೀವನದಲ್ಲಿ ನಿನಗೆ ಒಂದು ಜಾಗಕ್ಕೆ ಏರಬೇಕಿತ್ತು ಆ ಜಾಗ ಏರೋಕೆ ನೀನು ನಮ್ಮ ಸ್ನೇಹ ಮತ್ತೆ ನನ್ನನ್ನ ಏಣಿ ತರಹ ಉಪಯೋಗಿಸಿಕೊಂಡೆ ನೀನು ನಿನ್ನ ಜಾಗಕ್ಕೆ ಮುಟ್ಟಿದ ಮೇಲೆ!!!? ಏಣಿ ಅವಶ್ಯಕತೆ ಇಲ್ಲಾ ಅಂತ ಸ್ವಲ್ಪನೂ ಕರುಣೆ ತೋರದೆ ಆ ಏಣಿಯನ್ನ ಕಾಲಿಂದ ತೂರಿಬಿಟ್ಟೆ. ಅಯ್ಯೋ ಪಾಪ ನಿಂಗೆನು ಗೊತ್ತು ನೀನು ಹತ್ತಿರೋ ಜಾಗ ನಿಂಗೆ ಶಾಶ್ವತ ಅಲ್ಲಾ ಅಂತ, ಹಾಗಂತ ನೀನು ಅಲ್ಲಿಂದ ಮತ್ತೆ ಕೆಳಗೆ ಬರೋದು ನಂಗೂ ಇಷ್ಟ ಇಲ್ಲಾ ಆದ್ರೂ ನೀನು ಕೆಳಗೆ ಬರಬೇಕು ಅಂದ್ರೆ ಇದೆ ಏಣಿ ಬೇಕು ಏನಂತಿಯಾ..? ಇಲ್ಲಾ ನಾನು ಮತ್ತೆ ಕೆಳಗೆ ಬರೋಲ್ಲಾ ಎನಿದ್ರೂ ಅಲ್ಲಿಂದ ಮೇಲೇನೆ ಹೋಗುದು ಅಂತಿಯಾ? ಮೂರ್ಖ ಅದಕ್ಕೂ ಮತ್ತೆ ಏಣಿನೇ ಬೇಕಲ್ಲೋ....

ನಾವು ಮಾಡೋ ಕಾರ್ಯಗಳು, ಆಡೋ ಮಾತುಗಳು ಮತ್ತು ಯೋಚಿಸೋ ಯೋಚನೆಗಳು ನಮ್ಮ ಜೀವನಾನ ರೂಪಿಸೋದು ಅಂದ್ರೆ ನಮ್ಮ ಜೀವನ ಅನ್ನೋದು ಅವುಗಳ ಪ್ರತಿಬಿಂಬ ಗೊತ್ತಾಯ್ತಾ? ಈ ಪ್ರಪಂಚದಲ್ಲಿ ನಿನಿಲ್ಲಾ ಅಂದ್ರೆ ನಾನಿಲ್ಲಾ ಅಥವಾ ನಾನಿಲ್ಲಾ ಅಂದ್ರೆ ನಿನಿಲ್ಲಾ ಅಂತೇನಿಲ್ಲಾ ಆಯ್ತಾ? ನಾನಿಲ್ಲ ಅಂದ್ರೂ ನೀನಿರ್ತಿಯಾ, ಹಾಗೆ ನಿನಿಲ್ಲಾ ಅಂದ್ರೂ ನಾನೂ ಇರ್ತಿನಿ. ಆದ್ರೆ ವಿಷಯ ಎನಂದ್ರೆ ನಾವು ಮನುಷ್ಯರು ಕಾಡಿನಲ್ಲಿರೋ ಪ್ರಾಣಿಗಳಲ್ಲಾ, ಒಂದು ಸಮಾಜದಲ್ಲಿ ಜೀವನ ಸಾಗಿಸುತ್ತಿದ್ದೆವೆ ಅಂದ ಮೇಲೆ ಒಬ್ಬರು ಇನ್ನೊಬ್ಬರೊಂದಿಗೆ ಪ್ರೀತಿ, ಸ್ನೇಹ ಗಳಂತ ಸಂಭಂಧಗಳನ್ನ ಇಟ್ಟುಕೊಂಡು ಅವುಗಳಿಗೆ ಬೆಲೆಕೊಟ್ಟು ಬಾಳಬೇಕು ಇಲ್ಲಾಂದ್ರೆ ನಮ್ಮ ಜೀವನಕ್ಕೆ ಅರ್ಥಾನೇ ಇರಲ್ಲಾ....

ನಿನ್ನ ಗುಣಗಳು, ನಿನ್ನ ಯೋಚನೆಗಳು ಒಳ್ಳೆಯವೋ ಕೆಟ್ಟವೋ ಗೊತ್ತಿಲ್ಲಾ ಅವುಗಳೇ ನಿನ್ನ ಕಾಪಾಡಲಿ ಆಯ್ತಾ. ನೀನು ನನ್ನ ಸ್ನೇಹಕ್ಕೇ ಒಳ್ಳೆ ಅರ್ಥ ಕೊಟ್ಟಿದಿಯಾ ಅದನ್ನ ನಾನು ನನ್ನ ಜೀವನದ ಕೊನೆತನಕ ನಿನ್ನ ನೆನಪಾಗಿಸಿಕೊಂಡು ನನ್ನ ಜೊತೆನೇ ಇಟ್ಟುಕೊಂಡಿರ್ತಿನಿ ಅಷ್ಟು ಸಾಕು ನಂಗೆ, ನಿನ್ನಿಂದ ಮತ್ತೆನು ಬೇಡ. ನಿನ್ನ ಜೊತೆ ಸ್ನೇಹ ಬೆಳೆಸಿ ಕೊನೆಗೆ ದು:ಖ ಪಡೋ ಪರಿಸ್ಥಿತಿಯನ್ನ ನಾನೇ ತಂದುಕೊಂಡೆ ಅದು ನನ್ನ ತಪ್ಪು. ನಮ್ಮ ಬೇರೆ ಸ್ನೇಹಿತರ ಹಾಗೆ ನಿನ್ನನ್ನ ಎಲ್ಲಿ ಇಡಬೇಕೋ ಅಲ್ಲೇ ಇಟ್ರೆ ನೀನೂ ಸರಿಯಾಗಿರ್ತಿದ್ದೆ ನಾನು ನಿನ್ನನ್ನ ಅವಶ್ಯಕ್ಕಿಂತ ಜಾಸ್ತಿನೇ ಹತ್ರ ತಗೊಂಡೆ ಮತ್ತೆ ಅದಕ್ಕೆ ನೀನು ತಕ್ಕ ಪ್ರತಿಫಲ ಕೊಟ್ಟುಬಿಟ್ಟೆ ಇದರಿಂದ ನಂಗೆ ನನ್ನ ಜೀವನದಲ್ಲಿ ಒಳ್ಳೆ ಪಾಠ ಕಲಿಸಿಕೊಟ್ಟೆ ಥ್ಯಾಂಕ್ಸ್ ಕಣೋ ನಿಂಗೆ...

ಚೆನ್ನಾಗಿದೆ ಅಂತ ಮನೆಯೊಳಗೆ ತಂದೆ ನೋಡು ಅದೇ ನನ್ನ ತಪ್ಪು. ನಂತ್ರ ಅದರ ಬಣ್ಣ ಮಾಸಿದ ಮೇಲೆನೆ ಗೊತ್ತಾಯ್ತು ಅದು ಒಳ್ಗೆ ತರೋ ವಸ್ತು ಆಗಿರಲಿಲ್ಲ ಮನೆಯಿಂದ ಹೊರಗೆ ಇಡಬೇಕಿತ್ತು ಅಂತ.... ಎನ್ಮಾಡೊಕಾಗೊತ್ತೆ ಒಳಗಡೆ ತಂದಾಗಿದೆ ತಂದ ತಪ್ಪಿಗೆ ಇಷ್ಟು ದಿನ ಇಟ್ಕೊಂಡಾಯ್ತು... ಈವಾಗ ಮತ್ತೆ ಒಳಗೆಡೆ ಇಟ್ಟುಕೊಂಡು ಇರೊದು ಕಷ್ಟ, ಕಷ್ಟ ಆದ್ರೂ ಪರವಾಗಿಲ್ಲಾ ಅಂತ ಸಹಿಸಿಕೊಳ್ಳಬಹುದಿತ್ತು ಆದ್ರೆ ಏನ್ಮಾಡೋದು ನಂಗೆ ಅದನ್ನ ಮತ್ತೆ ಮನೆಯೊಳಗಾಗಲೀ ಮನದೊಳಗಾಗಲೀ ಇಟ್ಟುಕೊಳ್ಳೊ ಇಷ್ಟ ಇಲ್ಲಾ, ನನ್ನ ಪಾಲಿಗೆ ಇಷ್ಟ ಅನ್ನೊದು ಕಷ್ಟಕ್ಕಿಂತ ದೊಡ್ಡದ್ದು ಅದು ನಿಂಗೂ ಗೊತ್ತು ಅದಕ್ಕೆ ಹೊರಗಡೆನೇ ಇಡ್ತಿನಿ..
ನಿಜ ಹೇಳ್ತೀನಿ "ನೀನು ಹಿಗಾಗ್ತೀಯಾ ಅಂತ ಗೊತ್ತಿದ್ರೆ...... ನಿಂಜೊತೆ ನಾನೂ ಹಾಗಿರ್ತಿರಲಿಲ್ಲಾ......, ಇವಾಗ ನೀನು ಹೀಗಾಗಿದ್ದೀಯಾ ಅಂತ ಗೊತ್ತಾಯ್ತು ಹಾಗಾಗಿ ನಿಂಜೊತೆ ನಾನೂ ಹಾಗಿಲ್ಲಾ... ಅಷ್ಟೆ... ಮತ್ತೆನು ಇಲ್ಲಾ..... "